ಸುಖ


ಮಸಿ ಮೆತ್ತಿದ ಕರಿ ಗೋಡೆ
ಉರುಟು ಬುಡ್ಡಿ ದೀಪ
ಕೆಲವೇ ಕೆಲವು ಪಾತ್ರೆಗಳು
ಹಿಂದೆ ದೊಡ್ಡ ಕಪ್ಪು ನೆರಳು 
ಮೂಲೆಯ ಸೀಮೆಎಣ್ಣೆ ಸ್ಟವ್
ಅರ್ಧ ತೆರೆದ ಗಿಡ್ಡ ಕಿಟಕಿ 
ನೀರಿನ ಡ್ರಂ
ನೇತು ಹಾಕಿದ ಬೀನೆ ಚೀಲ 
ಅಟ್ಟಕ್ಕೆ ಆನಿಸಿಟ್ಟ ಮರದ ಏಣಿ
ಅದರಾಚೆಗಿನ ಕಡು ಕತ್ತಲ ಲೋಕ 
ಕಿರ್ರೆನುವ ರಾತ್ರಿ ಹುಳು
ಸಾಲು ಹಂಚಿನ ನಡುವ ಗಾಜಿನ ಛಾವಣಿ
ಮಿಣುಕು ಚಂದಿರ
ಮಬ್ಬು ಬೆಳಕಿನ ಬಡ್ದು ಒಲೆಗಳು
ಕೆಂಪು ಕೆಂಡ
ಕಾದ ತವ 
ಮೊಟ್ಟೆ ಸುರಿದ ಸದ್ದು
ಉರಿವ ಕಟ್ಟಿಗೆಯ ಹದವಾದ ಕಾವು
ಬೂದಿ ಮೆತ್ತಿದ ಸುರುಳಿ ಹೊಗೆ
ಬಾಣಲೆ ಬದಿಗೆ ಗಟ್ಟಿ ಮುಚ್ಚಿಟ್ಟ ಭರಣಿ 
ಅಡಗಿಸಿಟ್ಟ ಜೇನುತುಪ್ಪದ ಬಾಟಲಿ 
ಮಾಸಲು ಬಲ್ಬಿಗೆ ಹೂವಿನಂಥ ಕೊಡೆ
ಮೊಳೆ ಹೊಡೆದ ನೀಲಿ ಕೃಷ್ಣ ಪಟ
ತುರುಕಿಸಿಟ್ಟ ನವಿಲುಗರಿಗಳು
ಸದಾ ಲೋಚಗುಟ್ಟುವ ಹಲ್ಲಿ
ಗೋಡೆಗೆ ತಾಗಿಸಿಟ್ಟ ಮರದ ಬೆಂಚುಗಳು
ಹಾರ ಹಾಕಿದ ಅಜ್ಜನ ಫೋಟೋ
ಬಾಡಿದ ಹೂ
ಉರಿದ ಉದುಬತ್ತಿ ಅವಶೇಷ
ಭೂತ, ಪಿಶಾಚಿ , ಸತ್ತವರ ಕಥೆ
ಮುಸುಕೆಳೆದು ಮಲಗುವ ಚಾಪೆ
ಸದ್ದಿಲ್ಲದೇ ಸಾಗಿದ ರಾತ್ರಿಗಳು
ಅಲ್ಲೆಲ್ಲೋ ಕಳೆದು ಹೋಗಿರುವ
-ನಾನು ಮತ್ತು 
-ಬಾಲ್ಯ


23/3/2014


ಹವಣಿಕೆ; ಅದರಾಚೆ


ಹುಚ್ಚಿ ಅವಳು.
ಕೆನ್ನೆಗೆ ಕೆಂಪು 
ಉಗುರಿಗೆ ರಂಗು 
ಕಣ್ಣಿಗೆ ಕಾಡಿಗೆ ತಿಕ್ಕುತ್ತಾಳೆ.
ಕಿವಿಗೆ ದೊಡ್ಡ ಝುಂಕಿ 
ಮುತ್ತಿನ ಸರ 
ಕೂದಲನ್ನುದ್ದಕ್ಕೆ ಹೆಣೆದು 
ಕೆಳಗೆ ಬಿಡುತ್ತಾಳೆ. 
ತಿಳಿ ಹಸಿರು ಅಂಗಿ 
ಹೆಗಲ ಮೇಲಿನ ಸೆರಗು 
ತುದಿ ಎರಡನ್ನೂ ಸೇರಿಸಿ
ಗಂಟು ಕಟ್ಟುತ್ತಾಳೆ.
ತುಟಿಗೆ ಗುಲಾಬಿ ಮೆತ್ತಿ 
ಕಾಲ್ಗೆಜ್ಜೆ ಹಾಕಿ  
ಜಗತ್ತಿನಲ್ಲೇ ಸುಂದರಿ 
ಎಂಬಂತೆ ಸಂಭ್ರಮಿಸುತ್ತಾಳೆ.
ನಾಚಿಕೊಳ್ಳುತ್ತಾಳೆ 
ಮೆಲ್ಲ ನಗುತ್ತಾಳೆ 
ಕನಸು ಕಾಣುತ್ತಾಳೆ
ಉಸಿರಾಡುತ್ತಾಳೆ.   
ಮೆಲ್ಲ ಓಡಿ ಬಂದು 
ಕನ್ನಡಿ ಮುಂದೆ ನಿಲ್ಲುತ್ತಾಳೆ.
ಅಸೂಯೆಯಿಂದ ನೋಡುತ್ತಾಳೆ  
ಆಸೆಯಿಂದ.
ತನ್ನಲ್ಲೇ ತಾನು ಮೋಹಗೊಂಡಂತೆ
ನಿಧಾನಕ್ಕೆ 
ಕಣ್ಣಲ್ಲಿ ಕಣ್ಣಿಟ್ಟು 
ಗಮನಿಸುತ್ತಾಳೆ
ರೆಪ್ಪೆ ಮಿಟುಕಿಸದೆ.
ಮುಖ ಬೆವರುತ್ತದೆ;
ಬಣ್ಣ ಬಿಡುತ್ತದೆ.
ಬೆಚ್ಚಿ ತಡಕಾಡಿ
ಕಣ್ಣ ಕೆಳಗಿನ ಕಪ್ಪನ್ನು
ತಿಕ್ಕಿ ಉಜ್ಜುತ್ತಾಳೆ.
ತುಟಿಯ ಗುಲಾಬಿಯನ್ನು
ಅಂಗೈಯಿಂದ ಒರೆಸುತ್ತಾಳೆ.
ತೊಟ್ಟ ಮಣಿಗಳನು
ಎಳೆದು ಹಾಕುತ್ತಾಳೆ
ಸಡಿಲಾದ ಗಲ್ಲವನ್ನು 
ಮುಷ್ಟಿಯಲ್ಲಿ ಹಿಡಿದು 
ಜೋರಾಗಿ ಅಳುತ್ತಾಳೆ.
ಬಾಯಿ ತೆರೆದು.
ಶಬ್ಧ ಬರುವಂತೆ.
ಕುತ್ತಿಗೆಯ ನರಗಳೆಲ್ಲಾ 
ಹೊರ ಬೀಳುವಂತೆ,
ಒಡಕು ತುಟಿ 
ಬರಡು ಚರ್ಮ 
ಕತ್ತಿನ ಕುಳಿ 
ಸಣಕಲು ದೇಹ
ಜೋಲಾಡುವ ಎದೆಯನ್ನು 
ಬೆರಳಿಂದ ಸವರುತ್ತಾ
ನೋವನ್ನೆಲ್ಲಾ ಅಗೆದು ತೆಗೆವಂತೆ
ಹೊಟ್ಟೆಯೊತ್ತಿ ಹೊಕ್ಕುಳಿನಿಂದ;
ವಿಕಾರ ಮುಖಮಾಡಿ 
ಬಿಕ್ಕುತ್ತಾಳೆ.
ಮತ್ತೆ ಅವಸರಿಸಿ
ಬೂಟಿನೊಳಗೆ ಹುದುಗಿದ್ದ 
ಒರಟು ಪಾದವನ್ನು 
ಒತ್ತಿ ಎಳೆಯುತ್ತಾಳೆ.
ಕನ್ನಡಿಯ ಮೇಲೆಸೆದು
ಹಳೇ ಹಂಬಳಿಯನ್ನು 
ಮುದುಡಿ ಅಪ್ಪುತ್ತಾಳೆ.  


28/3/2014 



ಸ್ವಗತ


ನಾಟಕ.
ಒಳ್ಳೆಯತನದ್ದು.
ಬೇಸರಿಸಿಕೊಳ್ಳದಂತೆ,
ನೋವೇ ಆಗದಂತೆ,
ಬೇಕೇ ಇಲ್ಲದಂತೆ,
ಖುಷಿಯಲ್ಲಿರುವಂತೆ.
ಉದಾರಿಯಂತೆ.
ಪ್ರತೀಸಲವೂ
ಪ್ರತಿಯೊಂದರಲ್ಲೂ
ಒಂದು ಸುಳ್ಳು.
ಒಳ್ಳೆಯವಳಾಗುವ 
ಅನಿಯಂತ್ರಿತ 
ಪ್ರಯತ್ನ.
ಕೊನೆಗೆ 
ಎಕಾಂಗಿ.
ಒಬ್ಬಂಟಿ.

ಎದೆಯ ಗೋಡೆಗಳಾಚೆಗಿನ
ಗುದ್ದಾಟದಲ್ಲಿ 
-ಒದ್ದೆ ಕಣ್ಣು


18/8/2014


ಅವರಿಬ್ಬರು-೬



ಪ್ರೇಮವಿತ್ತು 
ಮುರಳಿಯೊಡನೆ.
ಉತ್ಕಟವಾದದ್ದು.
ಲೋಕವನ್ನೇ ಮರೆಸುವಷ್ಟು.
ಹುಚ್ಚು ಎನ್ನಿಸುವಷ್ಟು
ಉಸಿರಿಗೆ ಉಸಿರುಸೇರಿಸಿ
ತುಟಿಗಾನಿಸಿ 
ಮೈಮರೆತು 
ಮಗ್ನಳಾಗುವಷ್ಟು.
ಬದುಕನ್ನೇ ಪಣಕ್ಕಿಟ್ಟು
ಹೋರಾಡಿ 
ಪಡೆದುಕೊಳ್ಳುವಷ್ಟು.
ಧಿಕ್ಕರಿಸಿದರೆ
ಸದೆಬಡಿದು 
ನಿಲ್ಲುವಷ್ಟು.
ಜೀವನವನ್ನಾಗಿಸಿಕೊಳ್ಳುವಷ್ಟು.
- ಅವಳೀಗ ಕಲಾವಿದೆ!


15/8/2014