ಪೇಟೆಯೊಳಗಿನ ಮಲ್ಲಿಗೆಯ ನಡುವೆ ಘಮವಿಲ್ಲದ ದಾಸವಾಳ ನಾನು.
ಪಾಚಿಗಟ್ಟಿದ ಕಟ್ಟೆಯಾಚೆ
ನನ್ನಮ್ಮನ ತೋಟದಲ್ಲಿ
ಬಟ್ಟೆಯೊಗೆದ
ಸಾಬೂನಿನ
ನೀರುಂಡು ಬೆಳೆದ
ದುಂಡು ಮೈಯ
ದಾಸವಾಳ
ನಾನು.
ಬಿಳುಪು
ಬಳುಕು
ವೈಯಾರವಿಲ್ಲ್ಲ;
ಮೆಚ್ಚಿಸುವ
ಗೊಡವೆಯೂ ಇಲ್ಲ
ದಪ್ಪ ಬುಡದ
ಮೊಂಡು ಎಲೆಯ
ದಾಸವಾಳ
ನಾನು.
ಹನಿ ಮಂಜಿಗೆ
ಪುಳಕಗೊಂಡು
ಎಳೆ ಬಿಸಿಲಿಗೇ
ಬಿರಿದು ನಿಂತು
ತಳಮಳಗಳ
ತಾನೇ ಉಂಡು
ದಿನವಿಡೀ
ದಣಿಯದ
ದಾಸವಾಳ
ನಾನು.
ಘಮದ ಹಂಗು
ಬೇಡವೆನಗೆ
ನಗುವುದಷ್ಟೇ
ಬಾಳು ನನಗೆ
ಉಳಿವೆನೇನು
ನಾನು ಹೀಗೆ ?
ದಾಸವಾಳ
ನಾನು
05/09/2016