ದಾಸವಾಳ ನಾನು


ಪೇಟೆಯೊಳಗಿನ 
ಮಲ್ಲಿಗೆಯ ನಡುವೆ 
ಘಮವಿಲ್ಲದ 
ದಾಸವಾಳ 
ನಾನು. 

ಪಾಚಿಗಟ್ಟಿದ ಕಟ್ಟೆಯಾಚೆ
ನನ್ನಮ್ಮನ ತೋಟದಲ್ಲಿ
ಬಟ್ಟೆಯೊಗೆದ
ಸಾಬೂನಿನ
ನೀರುಂಡು ಬೆಳೆದ
ದುಂಡು ಮೈಯ
ದಾಸವಾಳ
ನಾನು.

ಬಿಳುಪು
ಬಳುಕು
ವೈಯಾರವಿಲ್ಲ್ಲ;
ಮೆಚ್ಚಿಸುವ
ಗೊಡವೆಯೂ ಇಲ್ಲ
ದಪ್ಪ ಬುಡದ
ಮೊಂಡು ಎಲೆಯ
ದಾಸವಾಳ
ನಾನು.

ಹನಿ ಮಂಜಿಗೆ
ಪುಳಕಗೊಂಡು
ಎಳೆ ಬಿಸಿಲಿಗೇ
ಬಿರಿದು ನಿಂತು
ತಳಮಳಗಳ
ತಾನೇ ಉಂಡು
ದಿನವಿಡೀ
ದಣಿಯದ
ದಾಸವಾಳ
ನಾನು.

ಘಮದ ಹಂಗು
ಬೇಡವೆನಗೆ
ನಗುವುದಷ್ಟೇ
ಬಾಳು ನನಗೆ
ಉಳಿವೆನೇನು
ನಾನು ಹೀಗೆ ?
ದಾಸವಾಳ
ನಾನು05/09/2016


ಛಾಯೆಅವಳು ಬೈದಷ್ಟೂ
ನಾನು ಬೆಳೆದೆ.
ಇಂಚಿಂಚೇ 
ರೂಪುಗೊಂಡೆ.
ಅವಳ ಭಯಾಗಳೆಲ್ಲದರಿಂದ 
ದೂರ ಉಳಿದು 
ಒಳ್ಳೆಯವಳಾದೆ.
ಅವಳ ದೃಷ್ಟಿಯೊಳಗಿಂದಲೇ 
ಬದುಕಿದೆ.
ಬೆಳಗಿದೆ.

ಅವಳಿಗೆ ತೃಪ್ತಿಯಿತ್ತು

ಅವಳ ಪರಿಧೀಯಾಚೆಗೂ
ಕಾಲಿಟ್ಟೆ.
ಮತ್ತೆ ಬೈದಳು.
ಭಯಗೂಂದಳು
ಅವಳ 
ಛಾಯೆಯಾಗಿ ಮೆರೆಯುವುದು 
ಬೇಡವಿತ್ತು ನನಗೆ.

ಅವಳು ಕಂಪಿಸಿದಳು.

ಲೋಕ ಮೆಚ್ಚಿತು.
ಹುಚ್ಚೆದ್ಡಿತು.
ಪರಿ ಪರಿಯಾಗಿ ಕೊಂಡಾಡಿತು.
ಯಾವುದೂ ಅವಳಿಗೆ 
ಖುಷಿ ಕೊಡಲಿಲ್ಲ.
ಅದೊಂದು ಕೊರಗಾಗೆ 
ಉಳಿಯಿತು.

ಮತ್ತೆ ಈಗಲೂ 
ಅದೇ ಬೆಳಗಿಸಿತು.
ವಿನಮ್ರಳಾಗಿಸಿತು.
ಮುಗ್ಧಳಾಗೇ ಇರಿಸಿತು
ವಿಸ್ಮಯತೆಯೊಳಗೇ.

ಅವಳು ನನ್ನೊಳಗೇ ಇದ್ದಳು.
ನಾನು 
ಅವಳ ಛಾಯೆಯಾಗಿರಲಿಲ್ಲ.


2/9/2015


ಅವನು-ಅವಳುನದಿ ದಂಡೆಯಲ್ಲಿ ಮುದುಡಿ ಕೂತಿದ್ದಳು.
ಅವನ ಕೈಹಿಡಿದು.
ಮೊಣಕಾಲ ಮೇಲೆ ಮುಖ ಊರಿ
ಬೆಚ್ಚಗಾಗುತ್ತಾ.

ಸರಿದು ಹೋಗುವ ಸಂಜೆಯಲ್ಲಿ
ಮೌನವೇ ಮಾತಾಡಿತ್ತು.

ದಿನ ಕೊನೆಯಾಗುವಾಗ
ಅವಳು
ಅವನವಳಾಗಿದ್ದಳು.

ಅಲ್ಲೇ ದೂರದಲ್ಲಿ
ಸಮುದ್ರ ಸೇರುತ್ತಿದ್ದ
ಆ ನದಿಯಂತೆ!


18/8/2015


ಧ್ಯಾನಪ್ರತಿ ಕ್ಷಣ,
ಪ್ರತಿಯೊಂದು ನಿಮಿಷವೂ
ನನ್ನ ಬಗ್ಗೆ
ನಾ ಕಟ್ಟಿಕೊಂಡಿದ್ದ ಗೋಡೆಗಳು
ಕೆಡವಿ ಬೀಳುತ್ತವೆ.

ನಿಜ ಸ್ವರೂಪ
ನಗ್ನವಾಗುತ್ತಾ ಹೋಗುತ್ತದೆ.

ಒಡೆದಷ್ಟೂ ಕೆಡವಿದಷ್ಟೂ..
ಮತ್ತೊಂದೇನೊ ಆವರಿಸಿರುತ್ತದೆ!

ಜೀವನ ಮುಗಿಯುತ್ತದೆ.

'ನಾನೂ' ಕೆಡವಿರುತ್ತೇನೆ.

8/8/2015


ಸಂಸಾರಿ ಸನ್ಯಾಸಿಅಪ್ಪನ ದಿವ್ಯ ಮೌನ, 
ಅಮ್ಮನ ಹೆಣಗಾಟ,
ಝಿಗ್ಗನೆ ಬದಲಾಗುವ 
ಜನರ ವರ್ತನೆ,
ಇದ್ದಕ್ಕಿದ್ದಂತೆ ಮಾಯವಾಗುವ 
'ಅವಳು,
ಒಮ್ಮೆಗೇ ಬದಲಾಗುವ
ಜೀವನ ಶೈಲಿ,
ಬಿಡಲಾಗದಂತೆ ಅಂಟಿಕೊಂಡಿರುವ 
ವ್ಯಸನಗಳು,
ಅಲ್ಪ ತೃಪ್ತರು ಅಡಗಿಸಿಟ್ಟ
ನೋವು,
ಸಿರಿವಂತನ ತಕ್ಕಮಟ್ಟಿನ 
ವಿಶ್ವಾಸ,
ಜಟೆಧಾರಿ-ಭೈರಾಗಿಯೊಳಗೆ ತುಂಬಿಕೊಂಡಿರುವ 
ಅನಂತ 
ಆನಂದ

ಎಲ್ಲವೂ ಅರ್ಥವಾಗಿ ಬಿಡುತ್ತದೆ 
ಒಮ್ಮೆಗೇ!

ನಾನು ನಾನಾಗಿರದಿದ್ದಾಗ.

ನಾನೂ ಗೊಣಗುತ್ತೇನೆ,
ನಾನೂ ಸುಖಿಸುತ್ತೇನೆ,
ರೋಧಿಸುತ್ತೇನೆ,
ಪ್ರೀತಿಸುತ್ತೇನೆ,
ಮುಕ್ತವಾಗಿ ಸಂಭ್ರಮಿಸುತ್ತೇನೆ,
ಮತ್ತೆಲ್ಲೋ..
ಎಲ್ಲರಂತಲ್ಲ ನಾನು 
ಎಂಬ ಭ್ರಮೆ 
ಕರಗುತ್ತದೆ.

ಎಚ್ಚರಾಗುತ್ತದೆ!

ಕಳೆದುಹೋದ ನನಗಾಗಿ 
ಮತ್ತೆ ಅರಸುತ್ತೇನೆ.

ಮತ್ತೆ ಎಲ್ಲವೂ 
ಒಮ್ಮೆಗೇ ಅರ್ಥವಾಗಿ ಬಿಡುತ್ತದೆ!


8/8/2015


ವಿಪರ್ಯಾಸ


ದ್ರೌಪದಿ ಆಗಬೇಕು ನನಗೆ.
ಪ್ರಶ್ನೆಗಳನ್ನು ಕೇಳಬೇಕು. 
ಖಂಡಿಸ ಬೇಕು. 
ವ್ಯಂಗ್ಯವಾಡಬೇಕು.
ಚುಚ್ಚಬೇಕು.
ಆಗ್ರಹಿಸಬೇಕು 
ನ್ಯಾಯಕ್ಕಾಗಿ 
ಹೋರಾಡಬೇಕು.
ಅವಮಾನಗಳನ್ನು, 
ಅಸಹನೆಗಳನ್ನು,
ಧಾರಾಳವಾಗಿ 
ಹೊರಹಾಕಬೇಕು.

ಜೊತೆಗೇ

ಸೀತೆಯಂತೆ ಬದುಕಬೇಕು.
ಬರುವುದನ್ನು 
ಬಂದಹಾಗೇ ಸ್ವೀಕರಿಸಿ.
ಚಕಾರೆತ್ತದೆ.
ಸ್ವಲ್ಪ-ಸ್ವಲ್ಪವೇ ಸ್ಪಂದಿಸಿ,
ಅಂತರ ಕಾಯಿದುಕೊಂಡು
ಮಾನ-ಅಪಮಾನಗಳನ್ನು
ಅವನ ಕೈಗಿತ್ತು.
ದಿವ್ಯಳಾಗಿ 
ತಪಸ್ವಿನಿಯಂತೆ
ಬದುಕಬೇಕು.

-'ನಿಸ್ವಾರ್ಥಿ'ಯಾಗಿ 
ಬಾಳಬೇಕು 
'ನಾನು'!


3/8/2015

ಹರಿದ ಹಾಳೆ-೨ನಯವಾಗಿ
ನಾಜೂಕಾಗಿ
ಕನಸುಗಳ ಮೇಲೆ
ಗೆರೆ ಎಳೆಯುವವರೇ
ಎಲ್ಲರೂ
ಬಚ್ಚಿಡಬೇಕವುಗಳನ್ನು
ಹೆಚ್ಚು ಕಾಣಿಸದಂತೆ
ಎಚ್ಚರಿರಬೇಕು
ಅವರಿವರ ಕನಸಿಗಾಗಿ
ನಿಮ್ಮವೇ
ಬಲಿಯಾಗುವವು
ದನಿ ಇರದ
ಮೂಕ
ಚೀತ್ಕಾರಗಳವು.
ಸ್ವಲ್ಪವೇ
ಕಿವಿ ಕೊಡಿ!
ಅವುಗಳಿಗೂ ಉಸಿರಿದೆ!
ಸಣ್ಣಗೆ ಮಿಡಿಯುವ
ಹೃದಯವಿದೆ.
ಸಿಡಿದೆದ್ದು ಗುಡುಗುವ
ಕಿಡಿಯೂ ಇದೆ
ಒಳಗೆಲ್ಲೋ
ಚಿಗುರಲಾರದ
ನೋವಿನ
ಭಾರವೂ ಇದೆ.
ಮೊಳೆಸಲಾರದು
ನಿಮ್ಮ ಕಣ್ಣೇರು
ಅವುಗಳನ್ನು
ತಣಿಸಿ ಹುದುಗಿಸುವ
ಮೊದಲೇ
ಮತೊಮ್ಮೆ
ಆಲಿಸಿ.
ಅವು
ನಮ್ಮವೇ!
ನಮ್ಮೊಳಗಿನವೇ!15/10/2015


ಮುಖಗಳು


ನನ್ನೊಳಗೂ ಒಬ್ಬ
ಕುಂತಿ ಇದ್ದಾಳೆ.
ಸದಾ ಕುಟುಕುವ
ಅದೆಷ್ಟೋ ಗುಟ್ಟುಗಳನ್ನು 
ಬಚ್ಚಿಟ್ಟವಳು.
ವ್ಯಾಸರಿಂದ ಪುರುಷರ
ಮೇಲೆ
ನಂಬಿಕೆ ಕಳಕೊಂಡ
ಸತ್ಯವತಿ ಇದ್ದಾಳೆ;
ಅದೆಷ್ಟೋ ದುರಂತಗಳಿಗೆ 
ಸಾಕ್ಷಿಯಾಗುತ್ತಾ 
ಅಸಹಾಯಕಳಾಗೆ
ಉಳಿದವಳು.
ಅಂಬೆ ಇದ್ದಾಳೆ 
ಎಲ್ಲರೊಳಗೊಬ್ಬಳಾಗಿದ್ದೂ
ಯಾರವಳೂ ಆಗದವಳು.
ಕೊನೆವರೆಗೂ ಒಂಟಿಯಾಗೇ 
ಉಳಿದವಳು.
ದಿಟ್ಟೆ-ಅವಳು.
ಅವಳ ನೋವು-ಇದೆ.
ಬೇರೊಬ್ಬರ 
ಆಯ್ಕೆಯೊಳಗೇ 
ಬದುಕ ನವೆಸುವ
ಅಂಬಿಕೆ-ಅಂಬಾಲಿಕೆಯರ
ಆತ್ಮವಿದೆ.
ಅಸಹನೆಯಿಂದ
ತನ್ನನ್ನೇ ಹಿಂಸಿಸಿಕೊಂಡ
ಗಾಂಧಾರಿ,
ಹಂಚಿಹೋದ ದ್ರೌಪದಿಯ
ಗೋಳಾಟವಿದೆ.
ಅನ್ಯಾಯದಲ್ಲಿ 
ಬೆಂದ
ಆವಳಂಥವೇ ಗಾಯಗಳಿವೆ
ನನಗೆ
ಕರ್ಣರು ಹುಟ್ಟಲಿಲ್ಲ,
ಭೀಷ್ಮರನ್ನು ಕಾಣಲಿಲ್ಲ.
ಶಪಿಸುವ ಶಕ್ತಿ ಇಲ್ಲ
ಮತ್ತು 
ನಾನೈವರನ್ನು ವರಿಸಲಿಲ್ಲ.

ಆದರೆ
ಒಮ್ಮೊಮ್ಮೆ
ಅದ್ಯಾರದ್ದೋ 
ತಂಗಿಯಾಗಿ 
ಮತ್ಯಾರದ್ದೋ ಪ್ರೇಯಸಿಯಾಗಿ,
ಅವನ ಹೆಂಡತಿಯಾಗಿ,
ಅಪ್ಪನ ಮಗಳಾಗಿ
ಮಕ್ಕಳಿಗೆ ತಾಯಿಯಾಗಿ.
ನಾನು
ಅದೆಲ್ಲವೂ ಆಗುತ್ತೇನೆ
ಮತ್ತು
ಅದೆಲ್ಲವೂ 
ನನ್ನೊಳಗೇ
ನಡೆಯುತ್ತವೆ.

ಕಾಲ ಚಕ್ರದ 
ಸಾರಥಿ
ಕೃಷ್ಣ ಮಾತ್ರ
ನಗುತ್ತಾನೆ.


7/4/2015ಹರಿದ ಹಾಳೆ


ನಮ್ಮಿಬ್ಬರ
ಹೊಸ ರಾತ್ರಿಗಳವು.
ಮದರಂಗಿ, ಮಲ್ಲಿಗೆ,
ಮುಗಿಯದಷ್ಟು 
ಮಾತುಗಳ ನಡುವೆ 
ಮೀಸೆ ತಿರುಗಿಸುತ್ತಾ 
ಅವ ಕೇಳಿದ್ದ,
'ನೀನ್ಯಾರನಾದ್ರೂ
ಇಷ್ಟ ಪಟ್ಟಿದ್ದೆಯ?'
'ಇಲ್ಲ.' 
ಉತ್ತರ ಸ್ಪಷ್ಟವಾಗಿತ್ತು.
'ಇಲ್ಲ??'
ಆಶ್ಚರ್ಯವಾಗಿಯೂ ನೋಡಿದ
ಅವನು
ನಾಲ್ಕಾರು ಹುಡುಗಿಯರ
ಹೆಸರು ಹೇಳಿದ್ದು ನೆನಪು.
ಎಲ್ಲರನ್ನು ಅರ್ಧಕ್ಕೇ
ಬಿಟ್ಟಿದ್ದನೆಂದೂ
ಹೇಳಿದ್ದ.
ಒಬ್ಬಳು ಹಠವಾದಿ ಎಂದೂ,
ಮತ್ತೊಬ್ಬಳ ಅಣ್ಣನಿಂದ 
ತೊಂದರೆಯಾಯಿತೆಂದೂ,
ಇನ್ನೊಬ್ಬಳು ವಿಪರೀತ 
ಬಿಂಕದವಳೆಂದು,
ಮತ್ಯಾರೋ ಒಬ್ಬಳನ್ನು
'ಬಜಾರಿ' 
ಎಂದೂ ಕರೆದಿದ್ದ.
ನಡು ನಡುವೆ 
ಕೆಲವೊಮ್ಮೆ ವಿಷಯವನ್ನು
ಸ್ವಾರಸ್ಯಕರವಾಗಿಸಿ;
ಮುಖ ಹತ್ತಿರಕ್ಕೆ ತಂದು 
'ಬೇಜಾರಾಗ್ತಾ ಇಲ್ಲ ತಾನೇ?'
'ಅವರ್ಯಾರೂ ಈಗಿಲ್ಲ ಬಿಡು!'
ಎಂದೂ ಹೇಳುತ್ತಿದ್ದ.
'ನಿನ್ಮಸಲ್ಲೂ ಯಾರಾದ್ರೂ 
ಇದ್ದಿದ್ದರೆ..ಹೇಳಿ ಬಿಡು;
ಯಾರೋ ಒಬ್ಬರಾದ್ರೂ 
ಇದ್ದಿರಲೇ ಬೇಕಲ್ಲ?'
ಎಂದಾಗ 
ಸಾಕಷ್ಟು ತಡಕಾಡಿದ
ನಾನು 
'ಒಬ್ಬ ಇದ್ದ.. '
ಎಂದು ಪ್ರಾರಂಭಿಸಿ
ಓಣಿ ಮರೆಯಲ್ಲಿ 
ದಿನವೂ 
ಕಾದುನಿಲ್ಲುತ್ತಿದವನ ಬಗ್ಗೆ
ಹೇಳಿದೆ.
ಒಂದೆರಡು ಬಾರಿ 
ದೂರದಿಂದಲೇ
ಚಂದವಾಗಿ ನಕ್ಕವನಿಗೆ 
ಹೆದರಿ 
ಆ ದಾರಿಯಲ್ಲಿ
ಸುಳಿಯದೆ ಇದ್ದದ್ದನ್ನೂ
ಹೇಳಿದೆ.
ಅದುವರೆಗೆ 
ಚೆನ್ನಾಗೆ ಇದ್ದವ 
ರಪ್ಪನೆ 
ದಿಂಬು ಕಸಿದುಕೊಂಡು 
ಮಗ್ಗುಲು
ಬದಲಿಸಿ
ಮಲಗಿಬಿಟ್ಟಿದ್ದ.


18/3/2015
  

ಅವರಿಬ್ಬರು-೯


ಅವ್ನು ನನ್ಹತ್ರ ಮಾತ್ನಾಡಲ್ಲ ಅಂತ 
ನಂಗೇನು ತುಂಬ ಬೇಜಾರಾಗ್ತಾ ಇಲ್ಲ.
ವಿಪರೀತ ನೋವು ಆಗ್ತಾ ಇಲ್ಲ.
ಆದ್ರೆ..
ತುಂಬ ದಿವ್ಸಗಳ ಸಂಗ ನೋಡು,
ಕಳಚಿ ಕೊಳ್ಳಿಕ್ಕೆ ತಯಾರೇ ಇಲ್ಲ.
ಮತ್ತೇನಾದ್ರೂ ನೆನಪಾಗ್ತದೆ
ಮತ್ತೆ ಮಾತ್ನಾದ್ವಾ ಅನ್ಸ್ತದೆ.
ಓಡಿ ಹೋಗಿ ನಿಲ್ಸಿ ನಗುವ ಅನ್ಸ್ತದೆ.  
ಬೈಸಿಕೊಳ್ಳುವ ಅನ್ಸ್ತದೆ.
ಸುಳ್ಳು ಸುಳ್ಳೇ ಜಗಳಾಡ್ವ,
ಸಿಟ್ಟು ಮಾಡಿಕೊಳ್ವ,
ಓರೆಯಲ್ಲಿ ಕದ್ದು ನೋಡ್ವ,
ಸಿಕ್ಕಿ ಹಾಕಿಕೊಂಡು ಕಣ್ಮುಚ್ಚಿ ನಗುವ,
ಪೆದ್ದು ಪೆದ್ದು ಥರ ಆಡ್ವ,
ಹರಟೆ ಹೊಡಿವಾ
ಮತ್ತೊಮ್ಮೆ ಕೇಳಿಯೇ ಬಿಡುವ
ಯಾಕ್ಮಾತಾಡ್ಲಿಲ್ಲ ಇಷ್ತ್ದಿದಿನ?- ಅಂತ
ತುಂಬಾ ಅನ್ಸ್ತದೆ.
ಗೀಳು ಹತ್ತಿ ಬಿಟ್ಟಿದೆ
ಜೊತೆಗಿರುವುದು.
ಮನಸ್ಸು ಕೇಳುದೇ ಇಲ್ಲ.
ಕನಸು ಕಾಣ್ಲಿಕ್ಕೆ ಶುರು ಮಾಡ್ತದೆ.
ಸುಮ್ಮನೆ.

ಚೂರು ಚೂರೇ ಆದ್ರೂ 
ಭಾರ ಹೊರುವವಳು ನಾನೇ ಅಲ್ವಾ?


27/12/2013


ನಿಸ್ವಾರ್ಥಿ


ಮತ್ತೆಯೂ ಅವಳು
ನನ್ನ ಜೊತೆಗಿದ್ದಳು.
ಎಲ್ಲ ಮುಗಿದು 
ರಾಡಿಯಾಗಿಸಿದ್ದ ಮೇಲೂ.
ಹುಚ್ಚೆದ್ದು ಕುಣಿದು 
ಹಾರಡಿದ್ದ ಮೇಲೂ.
ಬಿಚ್ಚಿಟ್ಟು ಬಿಕರಿ
-ಯಾಗಿಸಿದ್ದ ಮೇಲೂ..
   ಅವಳು ನನ್ನ ಜೊತೆಗಿದ್ದಳು.

ಮೂಕಿಯಾಗಿಸಿ.
ಖಾಲಿಯಾಗಿಸಿ.
ಅತ್ತು ಧಾರೆಯಾಗಿಸಿ.
ತೊಳೆಸಿ-ಶುದ್ಧಳನ್ನಾಗಿಸಿ..
ಮುತ್ತಿಟ್ಟು-ಮುತ್ತನ್ನಾಗಿಸಿ 
ನನ್ನ ಜೊತೆಗೇ ಇದ್ದಳು.

ಕಲಿಯಂತೆ ಕಾಯುತ್ತಾ 
ಮೌನವಾಗಿ ನೋಡುತ್ತಾ
ಹಿಡಿದೆಳೆದು ಬಿಗಿದಪ್ಪಿ 
ಒಂದೇಸಮನೆ ಓಡುತ್ತಾ
ಎಲ್ಲಾ ವಿಕಾರಗಳಿಂದ ದೂರ
ತಪ್ಪು-ಒಪ್ಪುಗಳಾಚೆ
ಎತ್ತಿ ಸಾಗಿಸುತ್ತಾ..

ಹಲುಬುತ್ತಾ 
ಬೈಯುತ್ತಾ
ತಿದ್ದುತ್ತಾ
ತೀಡುತ್ತಾ 
ಮಾನವಳನ್ನಾಗಿಸುತ್ತಾ
ತಾನೇ ಸವಕಲಾಗುತ್ತಾ
   ಅವಳು ನನ್ನ ಜೊತೆಗಿದ್ದಳು    

ಯಾರೇನೇ ಅಂದರೂ 
ಊರೇ ಉಗಿದರೂ
ಜೀವ ಕೊಟ್ಟಂದಿನಿಂದ
ಕ್ಷಮಿಸುತ್ತಾ.
ಕ್ಷಮಿಸುತ್ತಾ.
ಉದ್ಧರಿಸುತ್ತಾ.
ಹೆತ್ತಮ್ಮ ಅವಳು.
   ಮತ್ತೆ ನನ್ನ ಜೊತೆಗಿದ್ದಳು..


9/11/2013

  

ಅವರಿಬ್ಬರು-೮


ಅವನು ಕೇಳಿದ.
'ಅವನು' ಯಾರು ?
ಮೊದಲ ಭೇಟಿಯಲ್ಲೇ.
"ಯಾರಿಲ್ಲ" ಅಂದಿದ್ದೆ.
ಹೊರಡುವಾಗ ಮತ್ತೆ 
ಕೇಳಿದ.
"ಈಗ ಹೇಳು ;
ಯಾರವನು ?" ಅಂತ.
ಹೇಳಬೇಕಿತ್ತೇನೋ 
ನಾನು.
ಭಯವಾಯಿತು.
'ಎಲ್ಲಿ-ಮತ್ತೆ 
ಕಳೆದು ಕೊಳ್ಳುವೆನೋ'.. ಎಂದೇ?
ನನ್ನನ್ನೇ ನಾನು 
ಕೇಳಿಕೊಂಡೆ.
ಉತ್ತರ ಹೊಳೆಯುವ 
ಮೊದಲೇ 
ಬಾಯಿ ಬಿಟ್ಟಾಗಿತ್ತು.
'ಅವಳು' ನಾನಲ್ಲ.
ಆದ್ದರಿಂದ 
'ಅವನು' ಯಾರಾದರೆ 
ನಮಗೇನೂ ?
ತೃಪ್ತಿಯಿಂದ 
ನಕ್ಕು 
ತಲೆ ಕೊಡವಿಕೊಂಡ.
ಸತ್ಯ ಹೇಳಿದ 
ಖುಷಿ ನನಗಿದ್ದರೆ;
'ಅವಳು' ಮಾತ್ರ 
ಗೊಂದಲದಿಂದ 
ಬೆರಗಾಗಿದ್ದಳು. 


7/6/2014 

 

ಅವರಿಬ್ಬರು-೭


ಅದೊಂದು 
ತೀರದ ದಾಹ.
ಆರದ ಬೆಂಕಿ.
ತಣಿದರೂ ಒಳಗಿನ್ನೂ
ಜೀವಂತ ಕಿಡಿ.
ಭಗ್ನವಾಗಿಸಲು 
ಸ್ವಲ್ಪವೇ ಗಾಳಿ
ಸಾಕು. 
ಮತ್ತೆಲ್ಲಾ 
ಕರಕಲು.
ಅರ್ಧ ಬೆಂದ 
ಮನಸ್ಸು;
ಮೊಳಕೆ ಒಡೆಯುತ್ತಾದರೂ
ಹೇಗೆ? 
ಪ್ರೀತಿಯ ವಸಂತವ
ನಿರೀಕ್ಷಿಸುವ 
ಇನಿಯನೇ!

-ಅವಳು

8/5/2014

ಸುಖ


ಮಸಿ ಮೆತ್ತಿದ ಕರಿ ಗೋಡೆ
ಉರುಟು ಬುಡ್ಡಿ ದೀಪ
ಕೆಲವೇ ಕೆಲವು ಪಾತ್ರೆಗಳು
ಹಿಂದೆ ದೊಡ್ಡ ಕಪ್ಪು ನೆರಳು 
ಮೂಲೆಯ ಸೀಮೆಎಣ್ಣೆ ಸ್ಟವ್
ಅರ್ಧ ತೆರೆದ ಗಿಡ್ಡ ಕಿಟಕಿ 
ನೀರಿನ ಡ್ರಂ
ನೇತು ಹಾಕಿದ ಬೀನೆ ಚೀಲ 
ಅಟ್ಟಕ್ಕೆ ಆನಿಸಿಟ್ಟ ಮರದ ಏಣಿ
ಅದರಾಚೆಗಿನ ಕಡು ಕತ್ತಲ ಲೋಕ 
ಕಿರ್ರೆನುವ ರಾತ್ರಿ ಹುಳು
ಸಾಲು ಹಂಚಿನ ನಡುವ ಗಾಜಿನ ಛಾವಣಿ
ಮಿಣುಕು ಚಂದಿರ
ಮಬ್ಬು ಬೆಳಕಿನ ಬಡ್ದು ಒಲೆಗಳು
ಕೆಂಪು ಕೆಂಡ
ಕಾದ ತವ 
ಮೊಟ್ಟೆ ಸುರಿದ ಸದ್ದು
ಉರಿವ ಕಟ್ಟಿಗೆಯ ಹದವಾದ ಕಾವು
ಬೂದಿ ಮೆತ್ತಿದ ಸುರುಳಿ ಹೊಗೆ
ಬಾಣಲೆ ಬದಿಗೆ ಗಟ್ಟಿ ಮುಚ್ಚಿಟ್ಟ ಭರಣಿ 
ಅಡಗಿಸಿಟ್ಟ ಜೇನುತುಪ್ಪದ ಬಾಟಲಿ 
ಮಾಸಲು ಬಲ್ಬಿಗೆ ಹೂವಿನಂಥ ಕೊಡೆ
ಮೊಳೆ ಹೊಡೆದ ನೀಲಿ ಕೃಷ್ಣ ಪಟ
ತುರುಕಿಸಿಟ್ಟ ನವಿಲುಗರಿಗಳು
ಸದಾ ಲೋಚಗುಟ್ಟುವ ಹಲ್ಲಿ
ಗೋಡೆಗೆ ತಾಗಿಸಿಟ್ಟ ಮರದ ಬೆಂಚುಗಳು
ಹಾರ ಹಾಕಿದ ಅಜ್ಜನ ಫೋಟೋ
ಬಾಡಿದ ಹೂ
ಉರಿದ ಉದುಬತ್ತಿ ಅವಶೇಷ
ಭೂತ, ಪಿಶಾಚಿ , ಸತ್ತವರ ಕಥೆ
ಮುಸುಕೆಳೆದು ಮಲಗುವ ಚಾಪೆ
ಸದ್ದಿಲ್ಲದೇ ಸಾಗಿದ ರಾತ್ರಿಗಳು
ಅಲ್ಲೆಲ್ಲೋ ಕಳೆದು ಹೋಗಿರುವ
-ನಾನು ಮತ್ತು 
-ಬಾಲ್ಯ


23/3/2014


ಹವಣಿಕೆ; ಅದರಾಚೆ


ಹುಚ್ಚಿ ಅವಳು.
ಕೆನ್ನೆಗೆ ಕೆಂಪು 
ಉಗುರಿಗೆ ರಂಗು 
ಕಣ್ಣಿಗೆ ಕಾಡಿಗೆ ತಿಕ್ಕುತ್ತಾಳೆ.
ಕಿವಿಗೆ ದೊಡ್ಡ ಝುಂಕಿ 
ಮುತ್ತಿನ ಸರ 
ಕೂದಲನ್ನುದ್ದಕ್ಕೆ ಹೆಣೆದು 
ಕೆಳಗೆ ಬಿಡುತ್ತಾಳೆ. 
ತಿಳಿ ಹಸಿರು ಅಂಗಿ 
ಹೆಗಲ ಮೇಲಿನ ಸೆರಗು 
ತುದಿ ಎರಡನ್ನೂ ಸೇರಿಸಿ
ಗಂಟು ಕಟ್ಟುತ್ತಾಳೆ.
ತುಟಿಗೆ ಗುಲಾಬಿ ಮೆತ್ತಿ 
ಕಾಲ್ಗೆಜ್ಜೆ ಹಾಕಿ  
ಜಗತ್ತಿನಲ್ಲೇ ಸುಂದರಿ 
ಎಂಬಂತೆ ಸಂಭ್ರಮಿಸುತ್ತಾಳೆ.
ನಾಚಿಕೊಳ್ಳುತ್ತಾಳೆ 
ಮೆಲ್ಲ ನಗುತ್ತಾಳೆ 
ಕನಸು ಕಾಣುತ್ತಾಳೆ
ಉಸಿರಾಡುತ್ತಾಳೆ.   
ಮೆಲ್ಲ ಓಡಿ ಬಂದು 
ಕನ್ನಡಿ ಮುಂದೆ ನಿಲ್ಲುತ್ತಾಳೆ.
ಅಸೂಯೆಯಿಂದ ನೋಡುತ್ತಾಳೆ  
ಆಸೆಯಿಂದ.
ತನ್ನಲ್ಲೇ ತಾನು ಮೋಹಗೊಂಡಂತೆ
ನಿಧಾನಕ್ಕೆ 
ಕಣ್ಣಲ್ಲಿ ಕಣ್ಣಿಟ್ಟು 
ಗಮನಿಸುತ್ತಾಳೆ
ರೆಪ್ಪೆ ಮಿಟುಕಿಸದೆ.
ಮುಖ ಬೆವರುತ್ತದೆ;
ಬಣ್ಣ ಬಿಡುತ್ತದೆ.
ಬೆಚ್ಚಿ ತಡಕಾಡಿ
ಕಣ್ಣ ಕೆಳಗಿನ ಕಪ್ಪನ್ನು
ತಿಕ್ಕಿ ಉಜ್ಜುತ್ತಾಳೆ.
ತುಟಿಯ ಗುಲಾಬಿಯನ್ನು
ಅಂಗೈಯಿಂದ ಒರೆಸುತ್ತಾಳೆ.
ತೊಟ್ಟ ಮಣಿಗಳನು
ಎಳೆದು ಹಾಕುತ್ತಾಳೆ
ಸಡಿಲಾದ ಗಲ್ಲವನ್ನು 
ಮುಷ್ಟಿಯಲ್ಲಿ ಹಿಡಿದು 
ಜೋರಾಗಿ ಅಳುತ್ತಾಳೆ.
ಬಾಯಿ ತೆರೆದು.
ಶಬ್ಧ ಬರುವಂತೆ.
ಕುತ್ತಿಗೆಯ ನರಗಳೆಲ್ಲಾ 
ಹೊರ ಬೀಳುವಂತೆ,
ಒಡಕು ತುಟಿ 
ಬರಡು ಚರ್ಮ 
ಕತ್ತಿನ ಕುಳಿ 
ಸಣಕಲು ದೇಹ
ಜೋಲಾಡುವ ಎದೆಯನ್ನು 
ಬೆರಳಿಂದ ಸವರುತ್ತಾ
ನೋವನ್ನೆಲ್ಲಾ ಅಗೆದು ತೆಗೆವಂತೆ
ಹೊಟ್ಟೆಯೊತ್ತಿ ಹೊಕ್ಕುಳಿನಿಂದ;
ವಿಕಾರ ಮುಖಮಾಡಿ 
ಬಿಕ್ಕುತ್ತಾಳೆ.
ಮತ್ತೆ ಅವಸರಿಸಿ
ಬೂಟಿನೊಳಗೆ ಹುದುಗಿದ್ದ 
ಒರಟು ಪಾದವನ್ನು 
ಒತ್ತಿ ಎಳೆಯುತ್ತಾಳೆ.
ಕನ್ನಡಿಯ ಮೇಲೆಸೆದು
ಹಳೇ ಹಂಬಳಿಯನ್ನು 
ಮುದುಡಿ ಅಪ್ಪುತ್ತಾಳೆ.  


28/3/2014 ಸ್ವಗತ


ನಾಟಕ.
ಒಳ್ಳೆಯತನದ್ದು.
ಬೇಸರಿಸಿಕೊಳ್ಳದಂತೆ,
ನೋವೇ ಆಗದಂತೆ,
ಬೇಕೇ ಇಲ್ಲದಂತೆ,
ಖುಷಿಯಲ್ಲಿರುವಂತೆ.
ಉದಾರಿಯಂತೆ.
ಪ್ರತೀಸಲವೂ
ಪ್ರತಿಯೊಂದರಲ್ಲೂ
ಒಂದು ಸುಳ್ಳು.
ಒಳ್ಳೆಯವಳಾಗುವ 
ಅನಿಯಂತ್ರಿತ 
ಪ್ರಯತ್ನ.
ಕೊನೆಗೆ 
ಎಕಾಂಗಿ.
ಒಬ್ಬಂಟಿ.

ಎದೆಯ ಗೋಡೆಗಳಾಚೆಗಿನ
ಗುದ್ದಾಟದಲ್ಲಿ 
-ಒದ್ದೆ ಕಣ್ಣು


18/8/2014