ಅಜ಼ಾನ್ - a call for prayer



ದೂರದಲ್ಲೊಂದು 
ಆಳದ ಕೂಗು ಅರ್ಥ
ವಾಗದ ಭಾಷೆ
ಅರ್ಥ ತಿಳಿಯದ
ಹಾಡು.
ಬಿಳಿಯ ಗೋಪುರ
ದ ಸುತ್ತ ಪಾರಿವಾಳದ
ಗುಟುರು ಸುತ್ತುವ
ಜಗತ್ತಿಗೆ ಸತ್ಯ 
ದೆಡೆಯ ಕರೆಯು
ಚಾಚಿದ ತೋಳುಗಳ
ಸೇರುವ 
ದಾಹಾವು ಮರೆ
ತವರ ನೆನಪಿಸುವ
ಆ ಒಂದು 
ಉಸಿರು.

ಮುಳುಗುವ ಸೂರ್ಯ
ನೊಡನೆ ಮೊಳಗಿದ
ಆ ದನಿಯು
ಸತ್ತ ಕನಸುಗಳೊಳಗಿನ
ಸೂಪ್ತ ಕನವರಿಕೆಯು
ಭಾವನೆಗಳ ಕೆರಳಿಸುವ 
ನೋವ ನೆಚ್ಚರಿಸುವ
ಆವಿಯಾಗದ 
ಸುಖವ ಅರಸಲಾ 
ತರಿಸುವ 
ಆ ಸಣ್ಣ ಮೌನದಲಿ
ಸೂತಕದ ಭೀತಿಯು
ಎತ್ತರದ ದನಿಯ
ತಾರಕದ
ಆಲಾಪವು ಸಂಭ್ರಮ 
ದ ಗರ್ಭದಲಿ ತುಕ್ಕು 
ಹಿಡಿದಿರುವ
ನೋವು
ಪ್ರತೀ ಅಲಗಿನಲ್ಲೂ
ತೆರೆದು ಕೊಳ್ಳುವು
ದೇನೋ ನಿನ್ನೆಗಳ
ಮೇಲಿಂದ 
ತೇಲಿಬಂದಂತೆ ತಳ
ಮುಟ್ಟಿದ ರಾಡಿ
ಮೇಲೆದ್ದಂತೆ
ನಾಳೆಗಳ ನಂತರದ
ಬೆಳಕಿನಂತೆ

ಸುತ್ತಿಬಳಳಿದ ಸುಸ್ತು
ಹೆಪ್ಪುಗಟ್ಟಿದ 
ಅಳುವು ಪಲ್ಲವಿಸುವ 
ಪದಗಳ ಕೊನೆಯ
ಪ್ರತಿಧ್ವನಿಯು
ಮನವ ಕಲಕುವ
ಬಳುಕು; ಪ್ರಶಾಂತ
ಗಾಯನವು
ಕರುಣ ರಾಗದಲ್ಲೊಂದು
ದೈನ್ಯ ರೋಧನವು.
ಎಳೆದೆಳೆದು ಸಾಗುವ
ಸುಂದರ ಸಾಲು
ಗಳು ಕಿವಿ ಮುಟ್ಟಿದ 
ಶಬ್ಧ; ಕದ 
ತಟ್ಟಿದ ನೆನೆಸು
ಪ್ರಾರ್ಥಿಸುವ ಕೈಗಾಳಿಗಾ
ಪ್ರಾರ್ಥನೆಯ ತಿಳಿಸು!..



8/9/2011 


ಅವರಲ್ಲೊಬ್ಬ - ಅವ



ಚೈತ್ರದ ಹುಣ್ಣಿಮೆ.
ಹೊಳೆಬದಿಯ ಬಯಲು.
ಅಲ್ಲೇ ಎತ್ತರದಲ್ಲಿ 
ದೇವಸ್ಥಾನ.
ಆವತ್ತು ಜಾತ್ರೆ.
ಸೇರಿದ್ದ 
ಕೆಲವೇ ಮಂದಿ.
ಊರವರಷ್ಟೇ.
ಅವರಲ್ಲೊಬ್ಬ ಅವ.
ನಿರಹಂಕಾರಿ,
ನಿರ್ಭಾವುಕ.
ನಿರ್ವಿಕಾರ ಮುಖ.
ಅದರಲ್ಲಿ ನಗುವಿಲ್ಲ.
ದು:ಖದ ಲೇಪವೂ ಇಲ್ಲ.
ಒಂಥರಾ ತನ್ಮಯತೆ.
ನೀರಿನಿoದೆದ್ದು ಬಂದಂತೆ.
ಅತ್ತು, ತೋಯಿಸಿ 
ಖಾಲಿಯಾದಂತೆ.
ಶರಣಾಗಿ 
ತೋಡಿಕೊಂಡು
ಉಸಿರಾಡುವಂತೆ.
ಎಲ್ಲಾ ಕಳಕೊಂಡೂ
ಪಡೆದುಕೊಂಡಿದ್ದಂತೆ.
ಭಾರಹೊತ್ತು
ಭಾರ ಕಳಕೊಂಡಂತೆ.
ತೂಕದ ಹೆಜ್ಜೆಗೆ
ತೂಗುವ ತಲೆಯ ಮೇಲೆ
ದೇವರನ್ನು ಹೊತ್ತವ.
ಕೋಟಿ-ಕೋಟಿಯಲ್ಲೊಬ್ಬನವ
ಅವನ
ಅತ್ಯಂತ ಪ್ರೀತಿಯ
ಸೇವಕ- ಅವ.


28/5/2014 


ಅವಳು-ನೆನಪು


ಅವಳೆಲ್ಲಿ ಹೋದಳೋ.
ಮೊನ್ನೆಯೊಮ್ಮೆ 
ಕನಸಲ್ಲಿ ಬಂದಿದ್ದಳು.
ಸ್ವಲ್ಪ ಹಳೇ ಮುಖ ಹೊತ್ತು.
ಆ ಫೋಟೋದಲ್ಲಿರುವಂತೆ
ಒಂಥರಾ ನನ್ನಹಾಗೆ 
ಕಾಣಿಸಿದಳು.
ನಗುವಾಗ.
ಹೊರಗೆ ಕೂತಿದ್ದಳು
ಮೆಟ್ಟಿಲ ಮೇಲೆ.
ಯಾವತ್ತಿನ ಹಾಗೇ.
ನೆಟ್ಟಗೆ ಬೆನ್ನು
ಎಣ್ಣೆಯೊತ್ತಿ
ಬೈತಲೆ ಬಾಚಿದ ಕೂದಲು
ಅಗಲ ಮುಖ
ಅಚ್ಚ ಬಿಳಿ ಬಣ್ಣ
ಹತ್ತಿಯ ಹಗುರ ಸೀರೆ
ಒಂದು ಕಾಲದ 
ಸುಂದರಿ ಎಂದು 
ಯಾರೂ ಹೇಳಬಹುದು.
ಕಾಲ ಗೀಚಿದ್ದೊಂದಷ್ಟು 
ಗೆರೆ ಬಿಟ್ಟರೆ 
ಆ ದಿನಗಳ ವೈಭವದ
ಗುರುತು ಹಾಗೇ ಇತ್ತು.
ಅಜ್ಜಿ.
ಸತ್ತು ವರ್ಷವಾಯಿತು.
ಮೊನ್ನೆ ಅವಳ 
ಪೆಟ್ಟಿಗೆ ತೆರೆದಿದ್ದೆ.
ಪ್ರೀತಿಯಿಂದ ಎತ್ತಿಟ್ಟಿದ್ದ 
ಒಂದಷ್ಟು ಸೀರೆ,
ಒಂದು ಬಾಚಣಿಗೆ,
ಕುಂಕುಮದ ಡಬ್ಬಿ,
ಎರಡು ಇನ್‌ಲ್ಯಾಂಡ್ ಲೆಟರು
ನಾಲ್ಕು ಜಿರಳೆ ಗೋಲಿ
ಮತ್ತೊಂದು ಸಣ್ಣ 
ಪಕೀಟು.
ಅಜ್ಜ ಕೊಟ್ಟದ್ದಂತೆ.
ಅದರೊಳಗಿದ್ದ ಪುಟಾಣಿ 
ಕನ್ನಡಿ ಮತ್ತು 
ಇದು ರೂಪಾಯಿ ಪಾವಲಿ.
ಅವಳ ಸೀಮಿತ 
ಪ್ರಪಂಚದ ಹಾಗೆ.
ವಿಚಿತ್ರ ಅನ್ನಿಸಿತು.
ಅಲ್ಲೆಲ್ಲಾ ಹರಡಿದ್ದ
ಅವಳ ಪರಿಮಳ
ಆ ಮೆದು ಬೆರಳುಗಳ
ತಂಪು ಸ್ಪರ್ಶ
ಆರಿ ಹೋಗದಂತೆ  
ಕಾಪಿಡಲು ಮನಸ್ಸಾಗಿ
ಗಟ್ಟಿ ಮುಚ್ಚಿಟ್ಟೆ.
ಬಾಯ್ತುoಬ ಕರೆಯುವ 
ಮನಸ್ಸಾಗಿ
"ದೊಡ್ಡಮ್ಮಾ" ಅಂತ ಒಂದ್ಹತ್ತು
ಸಾರಿ ಕೂಗಿದೆ.
ದೂರದಿಂದ ಅವಳನ್ನು ಕೂಗುವ
ಹಾಗೆ.
ತುಳಸಿಕಟ್ಟೆಯಲ್ಲಿ ಕೂತಿದ್ದ ಕಾಗೆ 
ಕತ್ತು ಅಲುಗಿಸುತ್ತಿತ್ತು.
ಅವಳೆಲ್ಲಿ ಹೋದಳೋ..
ತನ್ನ 'ಪೇಟಿ'ಯೊಟ್ಟಿಗೆ 
ನಮ್ಮನೆಲ್ಲಾ ಬಿಟ್ಟು.


28/8/2014


ಅವರಿಬ್ಬರು - ೫


ಹಠವಾದಿ ಅವ.
ಕೊನೆಗೂ ಗೆದ್ದು ಬಿಟ್ಟಿದ್ದ.
ಹೇಳದೇ ಇದ್ದರೂ
ಕೊನೆಗೆ
ನಾನೇ ಸೋತಿದ್ದೆ.
ಮನಸ್ಸಲ್ಲೇ.
ಅದೆಂಥಾ 
ಸೆಳೆತವೋ ಅದು!
ಸುಂದರನಲ್ಲದಿದ್ದರೂ
ಸಧೃಡ.
ಚಂದವಿಲ್ಲದ 
ಚೆನ್ನಿಗ.
ತೀವ್ರವಾಗಿ ಪ್ರೀತಿಸುತ್ತಲೇ
ಹೃತ್ಪೂರ್ವಕ
ದ್ವೇಷಿಸುವವ.
ದಂಡಿಸುವವ 
ಹಂಗಿಸುವವ
ಚುಚ್ಚಿ-ಚುಚ್ಚಿ
ಮೆರೆಯುವವ.
ಮತ್ತೊಮ್ಮೆ,
ಸಾವಿರದಲ್ಲೊಮ್ಮೆ
ಕಣ್ಣಲ್ಲಿ ಕಣ್ಣಿಟ್ಟು 
ಮೆಲ್ಲಗೆ 
ನಿಜ ಉಸುರುವವ.
ಮೈ ನವಿರೇಳುವಂತೆ
ಕಣ್ಣಾಲಿಗಳು 
ಒದ್ದೆಯಾಗುವಂತೆ.
ಅದಕ್ಕಾಗೆಯೇ 
ಹಂಬಲಿಸಿ
ಕಾದಿದ್ದವಳಂತೆ
ನಾನೂ ಮೂಕಿಯಾಗುತ್ತಿದ್ದೆ.
ಆ ಸಂವೇದನೆಯನ್ನು 
ಮೌನವಾಗಿ 
ಅನುಭವಿಸುತಿದ್ದೆ.
ಧಿಕ್ಕರಿಸುತ್ತಲೆ 
ಬರಸೆಳೆವ ಆ
ಪರಿಯನ್ನು,
ನನ್ನ ಚಂಚಲತೆಯ
ಮೇಲಿದ್ದ ಆತನ 
ಹಿಡಿತವನ್ನು,
ಸ್ವಯಂ ಘೋಷಿತ 
ಸ್ವಂತಿಕೆಯ 
ಗರ್ವದ ಆಳ್ವಿಕೆಯನ್ನು,
ಖಂಡಿಸುತ್ತಲೆ 
ಆರಾಧಿಸಿದ್ದೆ.
ನಾನಲ್ಲದ್ದೆಲ್ಲಾ
ಅವನಾಗಿದ್ದ.
ಅವನಲ್ಲಿಲ್ಲದ್ದೆಲ್ಲಾ
ನನ್ನ ಬಳಿಯಿತ್ತು.
ಪರಿಪೂರ್ಣತೆಗೆ 
ಇನ್ನಾವುದರ
ಕೊರತೆ ಇತ್ತು?
ಈಗ ಹೇಳು,
ಸೋಲಲ್ಲದೆ ನನ್ನ ಬಳಿ
ಇನ್ನೇನು 
ಉಳಿದಿತ್ತು?


9/5/2014



ಲಹರಿ


ರಾತ್ರಿ ತೋಳನ ಕೂಗು
ನೀಲಿ ಚಂದ್ರನ ಬಯಕೆ
ತಲೆ ನೆತ್ತಿಯ ಮೇಲೆ
ಗುಂಪು ನಕ್ಷತ್ರ
ಬೆಳಗಿ ನಿಂತ ಬಾನು
ಉಬ್ಬರದ ಅಲೆಗಳು
ಉರಿದು ಬಿದ್ದ ತಾರೆ
ಫಳ್ಲ್ ,ಎಂದ ಹನಿ
ಬಿಳಿ ತಾವರೆ ಕೋಳ
ನೂರು ಮೆಟ್ಟಿಲು
ಗಾಳಿ ಬೀಸುವ ದಿಕ್ಕು
ಝುಂ! ಎಂದ ಮೈ
ಕೈಜಾರಿದ ಮುತ್ತು
ನೀರ ಲಹರಿ..


 24/12/2012


ನಡೆದದ್ದು


ಹೊಸ ಸಾಲುಗಳಲ್ಲಿ
ಮತ್ತದೇ ಹಳೆ ಹುಡುಗನ ನೆನಪಾಗಿದೆ.
.
ಹೌದು!,
ಅವನು 'ಹಳೆಯ'ವ ನ್ಯಾವಾಗ ಆದ ?
'ಹೊಸಬ' ಅಂತ ಯಾರೂ ಇಲ್ವೇ ಇಲ್ಲ !
ಆದರೂ ಅವನು ಹಳೆಯವನೇ.
ನನ್ನ ಹಳತಾದ ನಿನ್ನೆಗಳಲ್ಲಿ 
ನಿತ್ಯ ಹೊಸದಾಗಿ ಇರುವವನು.
ನನ್ನವನು.
'ನನ್ನವ'ನ್ಯಾವಾಗ ಆದದ್ದವ?
ನಾನು 'ಅವನವಳು' ಆಗ್ಲೇ ಇಲ್ಲ ಅಲ್ಲಾ!

ಹೌದಲ್ಲಾ!
ಅಂದ್ರೆ.. ಇನ್ನು ಸಾಲುಗಳೇ ಹುಟ್ಟುದಿಲ್ವಾ ?
ಇಷ್ಟುದಿನ ಇದ್ದದ್ದೆಲ್ಲ ಬರೀ ಭ್ರಮೆಯಾ?
ಮತ್ತೆ ಅವನು?
ನಾನು?
ಕವಿತೆ?
.
.
.
-ಮಥನ
-ವೈರಾಗ್ಯ
-ಕೊಲೆ
ಇತಿಹಾಸದ್ದು


26/12/2013

ಅವರಿಬ್ಬರು - ೪



ಧಗೆಯಾರದ ಎದೆ ನನ್ನದು
ಉರಿವ ನೆನಪುಗಳಾಗರ
ನಗೆ ತೀದಿಹೆ ಹೊಗೆ ತೋರದೆ 
ಸೋಲಲಷ್ಟೇನು ಆತುರ?

ದಿನ ಕಳೆದಿದೆ ಹತ್ತಾಗಿದೆ
ಸುಳಿವಿರದೇ ಸಾಗಿದೆ
ನೆನಪಿದೆಯೋ ಮರೆತಿರುವೆಯೋ
ಎದೆ ಸಣ್ಣಗೆ ನಡುಗಿದೆ

ಕುಂಡದ ಗಿಡ ಹೂ ಬಿಟ್ಟಿದೆ
ಚಂದ ಚಂದ ವಾಗಿದೆ
ಬಳಿಯೇನೋ ಹೇಳಬೇಕಿತ್ತು
ಅದೇನೋ ಅಡ್ಡಿಯಾಗಿದೆ.

ಒಂದಿನಿತೂ ಬದಲಾಗದ್ದು
ಮರೆಯಿಂದಲೇ ಕಂಡಾಗಿದೆ.
ನೋವೇ ಇರದ ಆ ಸಂಭ್ರಮ
ಒಳಗೆಲ್ಲೋ ಚುಚ್ಚುತ್ತಿದೆ.

ಒಂಟಿತನದ ಭಾವವೊಂದು 
ಇಂಚಿಂಚೇ ಹೆಚ್ಚುತ್ತಿದೆ.
ಗಂಟುಮುಖದ ಗಂಟಲಾಳ
ಹಿಂಸೆಯು ಮನೆಮಾಡಿದೆ.

ಓಡಿಹೋಗಿ ನಕ್ಕುಬಿಡಲು
ಬೆಟ್ಟದಷ್ಟು ಆಸೆಯಿದೆ.
ಮನ ಮಾಡಿದ ಮೊಂಡು ಹಠದ 
ತುಂಡು -ಇಷ್ಟೇ ಉಳಿದಿದೆ



9/9/2013

  

ಭ್ರಮೆ



ಇಳಿದ ಸಂಜೆ
ಕಪ್ಪು ಮರಗಳು
ವಿಚಿತ್ರ ಆಕೃತಿ
ದೂರದ ಜಗತ್ತು
ಕ್ಷೀಣ ದನಿಗಳು
ಬೊಗಳುವ ನಾಯಿ
ಕಿರಿಗುಟ್ಟುವ ಹುಳು
ಅಳುವ ಮಗು
ಬಾವಲಿಯ ಕೂಗು
ಅರ್ಧ ಚಂದ್ರ
ಒಂದು ಮಿಂಚುಳ್ಳಿ
ಸ್ತಬ್ಧ ಮೌನ
ಸತ್ತವರ ನೆನೆಪು
ಸಾವಿನ ಭೀತಿ
ತಬ್ಬಲಿ ಭಾವ
ಆಳಕಿಲಿದ ನಿದ್ರೆ
ತಾರಕದ ಶ್ರುತಿ
ವಿಷಾದದ ಗಾಳಿ
ಅರ್ಥ ಕಾಣದ ನಾಳೆಗಳು
ಅಪ್ಪ-ಅಮ್ಮ 
ನನ್ನವರ ವಾಸನೆ
ಸಣ್ಣ ನಗು
ಕಳಕೊಂಡ ಕಲ್ಪನೆ
ಆವರಿಸುವ ನಿಘೂಡತೆ
ಭಾವನೆಗಳ ಪರಾಕಾಷ್ಟೆ
ನಿಶ್ಚಲ ನಾನು
ಕಾಲನ ಪಯಣ
ಮೌನದ ರುಚಿ
ಪ್ರೀತಿಯ ಭೀತಿ
ಸಂತಸದ ವೇದನೆ
ನೋವಿನೊಳಗಿನ ವೈರಾಗ್ಯ
ಎತ್ತರದಲ್ಲೊಂದು ಮನೆ 
ಕತ್ತಲಲ್ಲಿ ಲೀನ.




23/9/2012


ಕನವರಿಕೆ


ಅವತ್ತು ಹುಣ್ಣಿಮೆ.
ನಾನು ಗುಡ್ಡದ 
ಅಂಚೆಗೆ ಹೋಗಿದ್ದೆ.
ನೀಲಿ ಕತ್ತಲೆ,
ಹಟ್ಟಿಯ ಹಿಂದಿನ ದಾರಿ
ಕೇರಿಯ ಆಚೆಗಿನ ಲೋಕ
ಗುಡ್ಡದ ತುದಿಯ 
ಅಟ್ಟಣಿಗೆಯ
ಬೆಳದಿಂಗಳು.
ಕೆನೆ ಬಣ್ಣದ ಉರುಟು ಚಂದಿರ
ತಂಗಾಳಿಗೆ ಸ್ವಲ್ಪವೇ 
ಮಿಸುಕಾಡುವ
ಎಲೆಗಳ ಸದ್ದು.
ಕಣಿವೆಯ ತುಂಬಾ
ದೊಂದಿ ಬೆಳಕಿನ
ಬೀದಿಗಳು.
ರಾಶಿ ರಾಶಿ 
ಮಿಂಚು ಹುಳ.
ರಾತ್ರಿ ಹೆಚ್ಚಾದಂತೆ ಮೆಲ್ಲ ತೆರೆದುಕೊಂಡ
ಆ ಸುಂದರ ವಿಸ್ಮಯತೆ.
ಅಲ್ಲಿ ಅವನು
ಬಂದಿದ್ದ.
ಕೈಯಲ್ಲೊಂದು ಕೊಳಲು
ಹಿಡಿದು
ತಲೆಯ ಎಡಬದಿಗೆ
ಗರಿ ಸಿಕ್ಕಿಸಿ
ಗೊಲ್ಲರಂತೆ.
ಅಲ್ಲೇ ಕೂತಿದ್ದ.
ದಿಬ್ಬದ ಮೇಲೆ
ಬರಿಬೆನ್ನು ಹಾಕಿಕೊಂಡು,
ಮೊಗೆದು ಸುರಿವ
ನೀರವತೆಯಲ್ಲಿ 
ನಾನು ಮೊಗ್ಗರಳಿ
ಹೂವಾಗಿದ್ದೆ.
ಅಲ್ಲೆಲ್ಲೋ ನನ್ನ
ಕೃಷ್ಣ ಸಿಕ್ಕಿದ್ದ.



27/04/2014


ಅವರಿಬ್ಬರು-೩



ಅವನೇನೂ ಹೇಳಲಿಲ್ಲ
ನಾನೇ ಮಾತಾಡಿಸಿದೆ
ಚಂದಕ್ಕೆಂಬಂತೆ
ನಕ್ಕ.
ಮತ್ತೆನು ಉಳಿದಿರಲಿಲ್ಲ
ಮೌನವನ್ನು ಬಿಟ್ಟು.
ಬಹಳಾ ಕಾಲವಾಗಿತ್ತು ನೋಡು,
ಅವನಿಗೆ ನನ್ನ ಗುರುತಾಗಿರಲಿಕ್ಕಿಲ್ಲ.
ಕತ್ತಲಾಗಿತ್ತು ಬೇರೆ.
ಸುಮ್ಮನಿದ್ದೆವು;
ನಡೆಯುತ್ತಾ 
ಅಷ್ಟು ದೂರ ಹೋದ ಮೇಲೂ
ಅವನೇ ದಾರಿ ಹೊರಳಿಸಿದ 
ತಿರುಗಿಯೂ ನೋಡದೆ.

ನನ್ನಂತೆಯೇ ಅವ.
ತೋರಿಸಿಕೊಡಲು ಇಷ್ಟವಿಲ್ಲ.
ಇನ್ನೂ ಹಾಗೇ ಇದ್ದ!


23/03/2014


ನಿವೇದನೆ



ಕಣ್ಣ ಒಳಗಿನ ಗೀರು
ಒಂದು ಟೊಳ್ಳು ಬೆಳಕು
ಪರಚಿಕೊಂಡ ಕೆನ್ನೆ 
ಒರಟು ಪಾದಗಳು 
ಸದಾ ನಗುವ ಮುಖ
ಗಾಢವಾಗುವ ಕಣ್ಣೀರು
ಕುರೂಪ, ಕುಬ್ಜ, ವಿಕಾರ
ಉಮ್ಮಳಿಸುವ ದುಃಖ
ಹಿಂಡಿಹಾಕುವ ತಿರಸ್ಕಾರ
ಒಂದು ನಿರಾಕರಣೆ
ಉತ್ಸಾಹ, ಅರಿಸುವಿಕೆ
ಗೆಲ್ಲುವ ಹುಮ್ಮಸ್ಸು
ಎಲ್ಲೂ ಸಲ್ಲದ ಭಾವ
ಅವರಂತಾಗುವ ಕನಸು
ಇವರಂತಾಗುವ ಕನಸು
ಕೊಂದುಕೊಳ್ಳುವ ಬಯಕೆ
ದೂರ ಸಾಗುವ ಆಸೆ
ಹಿಂದೆ ತಿರುಗದ ಹಾಗೆ
ಮಾತು ಮಾತು
ಮನ ತುಂಬಿದ ನಗು
ನಿಟ್ಟುಸಿರಿನ ಕೊನೆ
ವಿಷಾದದ ಎಳೆ
ಉಸಿರ್ಗಟ್ಟಿಸುವ ಅಸಮಾಧಾನ
ಕೊಲ್ಲುವ ಒಂಟಿತನ
ಮೊಳೆಯುವ ಭರವಸೆ
ಸಂತಸದ ಪರಿಮಳ
ವಿಶಾಲ ಪ್ರಪಂಚ
ಒಡೆದ ಗಾಜಿನ ಚೂರುಗಳು
ಸಾವಿರಾರು ಮುಖ
ಕನ್ನಡಿಯೊಳಗಿನ ಬಿಂಬ
ಗಂಟಲು ಹರಿಯುವ ಕೂಗು
ಅಳಿಸಲಾಗದ ಕಲೆ
ಅರದ ದಾಹ
ಒಂದು ಹುಡುಕಾಟ
ಆತ್ಮನ ಸುಸ್ತು
ವಿಶ್ರಾಂತಿಯ ತುಡಿತ
ಉದ್ವೇಗ, ಕೀಳರಿಮೆ
ಹಾಡು ಹೇಳುವ ಮೌನ
ಅರಳುವ ಮನಸು
ನಿಮಿರುವ ಕಿವಿಗಳು
ತುಂಬಿಕೊಂಡ ಏಕಾಂಗಿತನ
-ದ ಸುಂದರ ನೋವು
ಜೊತೆಗೇ ಇರುವ ಎದೆಬಡಿತ
ಮುಚ್ಚಿ ಕಣ್ಣುಗಳೊಳಗೆ
ಅಳಕ್ಕಿಳಿದ ನಿದ್ರೆ
- ಒಂದು ನಿವೇದನೆ
- ಒಂದು ಮುಗುಳು ನಗೆ
- ಒಂದು ಸಾಂತ್ವಾನ



8/8/2011


ಮೊದಲ ಲೋಕ


ಬೆಳಗಿನ ಸೂರ್ಯ
ಬೆಟ್ಟದ ಸಾಲು 
ಮಂಜಿನ ಸಮುದ್ರ
ಹಿಂದೆ ಮತ್ತೊಂದು
ಅದರಾಚೆಗಿನ್ನೊಂದು
ಹಸಿರು ಹಸಿರು 
ಹಂಚಿನ ಮಾಡು
ಗಾಜು,
ಅಲ್ಲೊಂದು ಇಲ್ಲೊಂದು
ಬಿಸಿಲಕೋಲು
ಗಿಡ್ಡ ಬೆಂಚು
ದೊಡ್ಡ ಕಿಟಕಿ
ಉದ್ದುದ್ದ ಗೋಡೆ
ಬಾವಿ ಕಟ್ಟೆ
ದಪ್ಪಗಟ್ಟಿದ ಪಾಚಿ
ನೀರು ನಿಂತ ಮೂಲೆ
ಕೆಂಪು ರಥ ಹೂ
ಗೊರಂಟಿಗೆ
ಚಿಕ್ಕ ಚಿಕ್ಕ ಕಲ್ಲು
ಬರಡು ಮೈದಾನ
ಗಾಳಿ ಮರ
ಕಡ್ಡಿಯಂಥ ಎಲೆ
ಮುರುಕು ಬೇಲಿ
ಸಾರಿಸಿದ ಅಂಗಳ
ನಾವೇ ನೆಟ್ಟ ಗಿಡ
ಹಳದಿ ಚಿಟ್ಟೆ
ಳೇ ಹೂಜಿ
ಪಾರಿವಾಳದ ಗೂಡು
ಮಿರಿ ಮಿರಿ ಕತ್ತು
ಹಿಕ್ಕೆ-ಪುಕ್ಕ
ಅಜ್ಜನ ಗಡ್ಡ
ಹಸಿರು ಲಂಗ
ಎರಡು ಜಡೆ
ವಿದ್ಯಾ ಟೀಚರ್
ಮಣ್ಣಿನ ಸ್ಟೇಜು
ತಲೆ ತುಂಬಾ ಹೂ
ಹೆಣ್ಣೆದ ಮಡಲು
ಚಪ್ಪರದ ಸಂಭ್ರಮ
ಹರಿಶ್ಚಂದ್ರ ನಾಟಕ
ನೀರ್ಕಡ್ಡಿ
ಮರದ ಸ್ಲೇಟು
ಮಗ್ಗಿ ಪುಸ್ತಕ
ಪುಣ್ಯಕೋಟಿ ಕಥೆ
ಅಳುಬರಿಸಿದ ಗಾಯ
ಅಡಿಕೋಲಿನ ಪೆಟ್ಟು
- ಮುಕ್ತತೆ
- ಮುಗ್ದತೆ
- ಸ್ವಾತಂತ್ರ್ಯ
'ನಮ್ಮ ಶಾಲೆ'
- ನನ್ನ ಕನ್ನಡ ಶಾಲೆ



14/11/2012


ಪ್ರತಿಧ್ವನಿ


ಹರಿಯ ಬೇಕು
ಹಂಚ ಬೇಕು
ಚೀರಿ-ನನ್ನೊಳಗಿದ್ದ
ನಾನೇ ಸೃಷ್ಟಿಸಿದ  ಚಿಪ್ಪ;
ರಂಧ್ರವೂ ಇಲ್ಲದ್ದಲ್ಲಿ
ಬಂಧಿಯಾಗುವ ಮೊದಲು;
ಉಸಿರು ಕಟ್ಟುವ ಮೊದಲು
ತಲೆ ಸಿಡಿಯುವ ಮೊದಲೇ
ಹರಿಯ ಬೇಕು ಅದು
ಹರಿಯ ಬೇಕು

ನಿಂತ ನೀರಾಗದೆ
ಕೊಳೆಯದೇ ನಾರದೆ
ಧುಮ್ಮಿಕ್ಕಿತಳಮುಟ್ಟಿ
ಮೇಲೆದ್ದು ನಿಲ್ಲದೇ
ಸೆಳವಿನಾಚೆಎಳವಿನಾಚೆ
ಭೋರ್ಗರೆವ ಸಮುದ್ರದಾಚೆ
ಮತ್ತೂ ನಿಲ್ಲದೆ,
ದಿಗಂತದತ್ತ..
ಹರಿಯ ಬೇಕು..
ಹರಿಯ ಬೇಕು..

3/5/2013


ನಿರಂತರ



ಓಡುತ್ತೇನೆ.
ಒಂದೇಸಮನೆ; ಏದುಸಿರುಬಿಡುತ್ತಾ.
ಧವಗುಟ್ಟುವ ಎದೆಯೊಳಗೆ
ಅಡಗಿಕೊಳ್ಳುತ್ತೇನೆ.
ಪ್ರತೀ ಉಸಿರಿನ ನಡುವಿನ
ಸಣ್ಣ ಜಾಗದಲಿ 
ಕಣ್ಣು-ಕಣ್ಣುಗಳು 
ಸಂಧಿಯಾಗದ್ದಲ್ಲಿ
ಮಾತಿನಲ್ಲಿ ಹುದುಗಿದ
ಮೌನದಡಿಯಲ್ಲಿ
ಜೀವಂತಿಕೆಯ ಚರ್ಮದೊಳಗೆ
ನೆಟ್ಟ ದೃಷ್ಟಿಯ ಹಿಂದಿನ ಕತ್ತಲೆಯೊಳಗೆ
ಮುದುಡಿ ಕೊಳ್ಳುತ್ತೇನೆ.
ಮತ್ತೆ ಎದ್ದು ಓಡುತ್ತೇನೆ.
ಪುನ: ಅಲ್ಲೆಲ್ಲೋ
ಅಡಗಿಕೊಳ್ಳುತ್ತಾ
ಸೋತು ನೋಯುವವರೆಗೆ.
ದಣಿದು ಬೀಳುವವರೆಗೆ.
ಬಾಯಾರುವವರೆಗೆ.
ಮತ್ತೆ?
ಮತ್ತೆ ಭಯವಾಗುತ್ತದೆ.
ಕಾಡುತ್ತದೆ.
ಮೀಟುತ್ತದೆ.
ತುಡಿಯುತ್ತಲೆ ಇರುತ್ತದೆ.
ಮತ್ತೊಮ್ಮೆ
ತಿಳಿಯುತ್ತದೆ.
ಪ್ರಪಂಚದ ವರ್ತುಲತೆ
ದಿಕ್ಕೆಟ್ಟ ವಾಸ್ತವತೆ.
ನಿಧಾನಕ್ಕೆ 
ಕೊಂದುಕೊಳ್ಳುತ್ತೇನೆ 
ಆದರೂ
ಸಾಯುವುದಿಲ್ಲ
ಒಸರುತ್ತೇನೆ.
ಜಿನುಗುತ್ತೇನೆ.
ಆತ್ಮದೊಳಗಿಂದ 
ಸದ್ದಿಲ್ಲದೇ
ನಿಶ್ಶಬ್ದವಾಗಿ
ಕುಟುಕುತ್ತೇನೆ.
ಮಿಡಿಯುತ್ತಲೇ 
ಇರುತ್ತೇನೆ.
ನಿರಂತರ.


26/3/2014