ಮೌನಿಯಾಗಬೇಕು ನಾನು.
ಮೋಡ ಮುಸುಕಿದ ಸಂಜೆಗತ್ತಲು
ಮಾತಿಲ್ಲದೆ ಕಳೆಯಲು ಒಂದುಕ್ಷಣ
ಝಗಮಗಿಸುತ್ತಾ ಸಾಗುವ ಜಗತ್ತಿನಲ್ಲಿ
ಸ್ತಬ್ಧವಾಗಿರಲೊಂದು ಕ್ಷಣ.
ಉಸಿರಿನಾಳದಲ್ಲಿ ಅಮುಕಿಹಿಡಿದಿರುವ
ನೋವಲ್ಲಿ ನಾವಾಗಲೊಂದು ಕ್ಷಣ.
ಒತ್ತರಿಸಿಬರುವ ನೆನೆಪುಗಳೊಂದಿಗೆ
ಮತ್ತೆ ಬದುಕಲು ಒಂದುಕ್ಷಣ.
ಮೌನಿಯಾಗಬೇಕು ನಾನು
ಉತ್ತರವಿಲ್ಲದ ಪ್ರಶ್ನೆಗಳಲ್ಲಿ
ಬೆತ್ತಲಾಗಲೊಂದು ಕ್ಷಣ,
ಕೋಣೆಯ ಕತ್ತಲ ಕೋನೆಯಲ್ಲಿ
ಅತ್ತು ಕರಗಲೊಂದುಕ್ಷಣ,
ಸಾವಿನ ಭೀತಿಯ ಹೊತ್ತು ತರುವ
ನಗಾರಿಯನ್ನಾಲಿಸಿ ಒಂದುಕ್ಷಣ
ಅನೂಹ್ಯ ಅವಾಚ್ಯ ಅಭದ್ರತೆಯಲ್ಲಿ
ಉಸಿರನ್ನು ಅರಸುತ್ತಾ ಒಂದುಕ್ಷಣ
ಮೌನಿಯಾಗಬೇಕು ನಾನು
ದೂರದ ತಾರಾನಗರಿಯಲ್ಲಿ
ಕನಸನ್ನು ಹೆಣೆಯುತ್ತಾ ಒಂದುಕ್ಷಣ
ಕಾಣದ ದೇವರ ಮಡಿಲಿನಲ್ಲಿ
ತಲೆಯನ್ನು ಆನಿಸಿ ಒಂದುಕ್ಷಣ.
ಹೆಜ್ಜೆಯ ಅಳಿಸುವ ಅಲೆಗಳಲ್ಲಿ
ನೆಲೆಯನರಸುತ್ತಾ ಒಂದುಕ್ಷಣ.
ಮೌನಿಯಾಗಬೇಕು ನಾನು
ನನ್ನೊಳಗಿನ ಆಳಕ್ಕಿಳಿದು
ಅಂತರಂಗಕ್ಕೆ ಕಿವಿಯಾಗಲೊಂದು ಕ್ಷಣ
ಹೃದಯದಲ್ಲಿ ಅಡಗಿರುವ ನಿಗೂಢತೆಗಳ
ತಾಕಿ ತಡಕಾಡಲೊಂದು ಕ್ಷಣ
ನಮ್ಮ ನಡುವಿನ ಸಣ್ಣ ಪರದೆಯ
ಸರಿಸಿ ಇಣುಕಲು ಒಂದು ಕ್ಷಣ
ಪ್ರಶಾಂತತೆಯ ಬಿಂದುವಲ್ಲಿ
ಒಂದಾಗಲೊಂದು ಕ್ಷಣ
ನಾನುನಾನಾಗಿರಲೊಂದು ಕ್ಷಣ.
20/6/2011