ಬಿಂದು ವಾಗಿಹೆ ನಾನು
ನಿನ್ನ ಲೀಲೆಯ ಮುಂದೆ
ಉಳಿದಿಲ್ಲ ಏನೂ
ಹೇಳಲು ನನಗೆ.
ಛಿದ್ರವಾಗಿದೆ ಒಡಕು
ಶುಭ್ರವಾಗಿದೆ ಬದುಕು
ನಂಬಿಕೆಯು ನುಂಗಿಸಿದೆ
ಲಕ್ಷಾಂತರ ತೊಡಕು.
ಮೂಕಿಯಾಗಿಹೆ ನಾನು
ಮಾತ ಮೀರಿದೆ ಎಲ್ಲಾ
ತುಂಬಿಬಂದ ಹೃದಯ
ಸೋರಹತ್ತಿದೆ ಮೆಲ್ಲ.
ಕೆಟ್ಟವಳು ನಾನು
ದೊಡ್ಡವನು ನೀನು
ನೋವ ಅಳಿಸಿದ ಈಗ
ಹೇಳಳುಳಿದಿದೆ ಏನು?
ಅರಿಯೆ ನಾನರಿಯೆ
ಬೇರೇನ ನಾನರಿಯೆ
ನನ್ನ ಅತ್ಯಾಪ್ತನೇ, ನಿನ್ನ
ಮರೆಯದೇ ನೆನೆಯೆ.
ಗೌಣವಾಗಿದೆ ಎಲ್ಲ
ಶೂನ್ಯದೆಡೆಯ ಪಯಣ
ಸರ್ವವೂ ನಿನ್ನದೆ
ಸೂತ್ರಧಾರ, ಹೇ, ಕರುಣ.
ಉಡುಗಿ ಹೋಗಿದೆ ಶಕ್ತಿ
ನಡುಗಿ ಹೋಗಿಹೆ ನಾನು
ಕರುಣೆಯ ಬೆಟ್ಟದ ಮುಂದೆ
ಬಿಟ್ಟೆಯಾಗ ಹತ್ತಿಹೆನು.
ದುರ್ಘಟನೆಯು ಘಟಿಸಲಿ
ನನ್ನೆದೆಯು ನೋಯಲಿ
ಹಾಗದರೀಮನವು ನಿನ್ನ
ಚರಣವ ಅರಸಲಿ
ಎತ್ತರದ ಭವವೊಂದು
ಮನವತುಂಬಿದೆ ಇಂದು
ನಿನ್ನ ಅನಂತ ಪ್ರೀತಿಯಲ್ಲಿ
ಮೈಮರೆತು ನಿಂದು.
ಕಳಚಿಕೊಂಡಿದೆ ಕೊಳಕು
ಕಾಣಹತ್ತಿದೆ ಬೆಳಕು
ಅಪ್ತತೆಯ ಕಲ್ಪಿಸಿದ
ನನ್ನೊಳಗಿನ ಇಣುಕು.
ಮರಳ ಹಾದಿಯ ತುಂಬ
ನೆರಳಾಗಿ ನೀನಿರು
ಬೆರಳನಿಟ್ಟೆಡೆ ನಡೆವೆ
ಚಿರ ಶಾಂತಿಯ ನೀಕೊಡು.
ಅಲಿಸು ನನ್ನೊಡೆಯ
ಈ ಆತ್ಮನ ಮೊರೆಯ
ಇಳಿಸು ನನ್ನಿಂದೀಗ
ಅಳಿಯದೀ ಹೊರೆಯ...
No comments:
Post a Comment